ಕೃಷ್ಣಶಾಸ್ತ್ರಿ, ಎಚ್

1870-1928. 1920 ರಿಂದ 1925ರವರೆಗೆ ಭಾರತ ಸರ್ಕಾರದ ಶಾಸನ ಇಲಾಖೆಯ ಮುಖ್ಯಾಧಿಕಾರಿಯಾಗಿದ್ದವರು. ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು. ಶಾಸನ ಇಲಾಖೆಯ ಮುಖ್ಯಾಧಿಕಾರಿಗಳಾಗಿದ್ದ ಖ್ಯಾತ ಜರ್ಮನ್ ವಿದ್ವಾಂಸ ಹುಲ್ಟ್‍ಸ್‍ಕ್‍ನ ಸಹಾಯಕರಾಗಿ ನೇಮಕಗೊಂಡರು. 1908ರಲ್ಲಿ ಸಹಾಯಕ ಸೂಪರಿಂಟೆಂಡೆಂಟರ ಹುದ್ದೆಗೇರಿದರು. ಅನಂತರ ವಿವಿಧ ಮಟ್ಟಗಳಲ್ಲಿ ಸೇವೆ ಸಲ್ಲಿಸಿದರು.

	ಸಂಸ್ಕøತ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪ್ರೌಢವಿದ್ವಾಂಸರಾಗಿದ್ದ ಇವರು 1909 ರಿಂದ 1919ರವರೆಗೆ ಸಂಪಾದಿಸಿದ, ದಕ್ಷಿಣ ಭಾರತದ ಭಾರತದ ಶಾಸನಗಳಿಗೆ ಸಂಬಂಧಿಸಿದ ವಾರ್ಷಿಕ ವರದಿಗಳು (ಆನ್ಯುಯಲ್ ರಿಪೋಟ್ರ್ಸ್ ಆನ್ ಸೌತ್ ಇಂಡಿಯನ್ ಎಪಿಗ್ರಫಿ) ಇತಿಹಾಸಕಾರರಿಗೆ ಅಮೂಲ್ಯ ಆಧಾರ ಗ್ರಂಥಗಳಾಗಿವೆ. ಇವರು ಶಾಸನ ಇಲಾಖೆಯ ತ್ರೈಮಾಸಿಕವಾದ ಎಪಿಗ್ರಾಫಿಯ ಇಂಡಿಕದ 17ನೆಯ (1923-24) ಸಂಪುಟವನ್ನೂ 16ನೆಯ (1921-22) ಮತ್ತು 18ನೆಯ (1925-26) ಸಂಪುಟಗಳ ಕೆಲವು ಸಂಚಿಕೆಗಳನ್ನೂ ಸಂಪಾದಿಸಿದರು. ಅಲ್ಲದೆ ಆ ಪತ್ರಿಕೆಯ ಪುಟಗಳಲ್ಲಿ ಅವರ 18 ಸಂಶೋಧನಾತ್ಮಕ ಲೇಖನಗಳು ಪ್ರಕಟವಾಗಿವೆ. ಸೌತ್ ಇಂಡಿಯನ್ ಇನ್ ಸ್ಕಿøಪ್ಷನ್ಸಿನ ಸರಣಿಯಲ್ಲಿ 2ನೆಯ ಸಂಪುಟದ 5ನೆಯ ಭಾಗವನ್ನೂ 3ನೆಯ ಸಂಪುಟದ 3ನೆಯ ಭಾಗವನ್ನೂ ಹೊರಡಿಸಿದರಲ್ಲದೆ ಅದೇ ಸರಣಿಯ 3ನೆಯ ಸಂಪುಟದ 4ನೆಯ ಭಾಗವನ್ನೂ 4 ಮತ್ತು 5ನೆಯ ಸಂಪುಟಗಳನ್ನೂ ಸಂಪಾದಿಸಿದರು. ಕರ್ಣಾಟಕದ ಮಾಸ್ಕಿಯಲ್ಲಿಯ ಅಶೋಕ ಶಾಸನವನ್ನು ಕುರಿತ (ಹೈದರಾಬಾದ್ ಆರ್ಕಿಯೊಲಾಜಿಕಲ್ ಸೀರೀಸ್ ನಂ.1) ಮತ್ತು ತಮಿಳುನಾಡಿನ ಮಹಾಬಲಿಪುರದ ಶಿಲಾದೇವಾಲಯವೊಂದರ 2 ಪ್ರತಿಮೆಗಳನ್ನು ಮತ್ತು 5 ಪಲ್ಲವ ಶಾಸನಗಳನ್ನು ಕುರಿತ (ಆರ್ಕಿಯೊಲಾಜಿಕಲ್ ಮೆಮ್ವಾರ್ಸ್, ನಂ.26) ಸಂಶೋಧನಾತ್ಮಕ ಪ್ರಬಂಧಗಳು ಅವರ ಇತರ ಪ್ರಬಂಧಗಳ ಪೈಕಿ ಮುಖ್ಯವಾದವು. ಭಾರತದ ದೇವದೇವತೆಯರ ಪ್ರತಿಮೆಗಳನ್ನು ಕುರಿತ ಅವರ ಸಚಿತ್ರಗ್ರಂಥ 1916ರಲ್ಲಿ ಪ್ರಕಟವಾಯಿತು. ಹಿಂದೂ ಪ್ರತಿಮಾಶಿಲ್ಪಗಳ ಅಧ್ಯಯನದಲ್ಲಿ ಅದು ಇಂದಿಗೂ ಉಪಯುಕ್ತ ಸಹಾಯಕ ಗ್ರಂಥವಾಗಿದೆ.

	ಕೃಷ್ಣಶಾಸ್ತ್ರಿಯವರ ವಿದ್ವತ್ತಿಗೆ ಮೆಚ್ಚಿ ಭಾರತ ಸರ್ಕಾರ ಅವರಿಗೆ 1912ರಲ್ಲಿ ರಾವ್‍ಸಾಹಿಬ್ ಮತ್ತು 1920ರಲ್ಲಿ ರಾವ್ ಬಹದ್ದೂರ್ ಬಿರುದುಗಳನ್ನು ಕೊಟ್ಟು ಗೌರವಿಸಿತು. ಅವರು 1924ರಲ್ಲಿ ಕೋಲಾರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1925ರಲ್ಲಿ ಅವರು ಗವರ್ನ್‍ಮೆಂಟ್ ಎಪಿಗ್ರಫಿಸ್ಟ ಹುದ್ದೆಯಿಂದ ನಿವೃತ್ತರಾದರು. 1928ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.			          
         						(ಕೆ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ